ಶಾಲೆಯ ಆಚೆಗಿನ ಶಿಕ್ಷಣ: ನೈಸರ್ಗಿಕ ಬಣ್ಣಗಾರಿಕೆಯಲ್ಲಿ ನಾನು ಕಂಡುಕೊಂಡ ಬದುಕು ಮತ್ತು ಜ್ಞಾನ

ಶಾಲೆಯ ಆಚೆಗಿನ ಶಿಕ್ಷಣ: ನೈಸರ್ಗಿಕ ಬಣ್ಣಗಾರಿಕೆಯಲ್ಲಿ ನಾನು ಕಂಡುಕೊಂಡ ಬದುಕು ಮತ್ತು ಜ್ಞಾನ

"ಜ್ಞಾನವೆಂದರೆ ಕೇವಲ ಶಾಲಾ-ಕಾಲೇಜುಗಳ ಮೆಟ್ಟಿಲೇರಿ ಪಡೆಯುವ ಅಕ್ಷರಗಳಲ್ಲ, ನಮ್ಮ ದೈನಂದಿನ ಪ್ರತಿಯೊಂದು ಕಾಯಕದಲ್ಲೂ ಅಡಗಿರುವ ಅರಿವೇ ನಿಜವಾದ ಜ್ಞಾನ." ಈ ಮಾತು ನನ್ನ ಪಾಲಿಗೆ ಕೇವಲ ಸುಭಾಷಿತವಲ್ಲ, ನನ್ನ ಬದುಕಿನ ಸತ್ಯ. ಕಳೆದ ಮೂರು ವರ್ಷಗಳಿಂದ ನೈಸರ್ಗಿಕ ಬಣ್ಣಗಾರಿಕೆಯನ್ನು  ನಾನು ಕೇವಲ ವೃತ್ತಿಯಾಗಿ ಸ್ವೀಕರಿಸಿಲ್ಲ, ಅದನ್ನೊಂದು ಬದುಕನ್ನು ರೂಪಿಸಿದ ಅಪ್ಪಟ ಪಾಠಶಾಲೆಯಾಗಿ ಕಂಡುಕೊಂಡಿದ್ದೇನೆ.


ನನ್ನ ಶಾಲಾ ದಿನಗಳು, ವಿಶೇಷವಾಗಿ ಒಂಬತ್ತನೇ ತರಗತಿಯ ಸಮಯ, ನನಗೆ ಸದಾ ಉಸಿರುಗಟ್ಟಿಸುವಂತಿತ್ತು. ಶಾಲೆಯ ಆ ನಾಲ್ಕು ಗೋಡೆಗಳ ನಡುವೆ ನನ್ನ ಸಮಯ ವ್ಯರ್ಥವಾಗುತ್ತಿದೆ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು. ಅಲ್ಲಿ ಮಕ್ಕಳಲ್ಲಿ  ಚೈತನ್ಯವನ್ನು ಬೆಳೆಸುವ ಬದಲು, ಸದಾ ಇನ್ನೊಬ್ಬರಿಗೆ ಹೋಲಿಸುವ ಸ್ಪರ್ಧೆಯಿತ್ತು. ನಿಸರ್ಗದ ನಿಯಮದಂತೆ, ಕೋತಿಗೆ ಮರ ಹತ್ತುವ ಸಾಮರ್ಥ್ಯವಿದ್ದರೆ, ಮೀನಿಗೆ ಈಜುವ ಕೌಶಲವಿರುತ್ತದೆ. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆ ಎಲ್ಲರಿಗೂ 'ಮರ ಹತ್ತುವ' ಒಂದೇ ಅಳತೆಗೋಲನ್ನು ಇಟ್ಟುಕೊಂಡಿರುವುದು ನನ್ನಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು.


ನನ್ನ ಹಿನ್ನೆಲೆ ಭಿನ್ನವಾಗಿತ್ತು. ನನ್ನ ಅಪ್ಪ-ಅಮ್ಮನಿಗೆ ಅಕ್ಷರ ಜ್ಞಾನವಿರಲಿಲ್ಲ, ಆದರೆ ಅವರಿಗೆ ಬದುಕಿನ ಬೇರೆ ಬಗೆಯ ಅಪಾರ ಜ್ಞಾನವಿತ್ತು. ದಿನದ ಕೂಲಿಗಾಗಿ ದಿನವಿಡೀ ದುಡಿಯಬೇಕಾದ ಅನಿವಾರ್ಯತೆ ಅವರದ್ದಾಗಿದ್ದರಿಂದ, ನನ್ನ ಓದು-ಬರಹದ ಕಡೆ ಸಮಯ ಕೊಟ್ಟು ಗಮನಹರಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಅಂದಿನ ಶಿಕ್ಷಕರಿಗೆ ಇರಲಿಲ್ಲ. ಎಂಟನೇ ತರಗತಿಯಲ್ಲಿದ್ದಾಗ ನಡೆದ ಆ ಒಂದು ಘಟನೆ ಇಂದಿಗೂ ಹಸಿರಾಗಿದೆ. ಗಣಿತ ತರಗತಿಯಲ್ಲಿ, ಪಾಠ ಅರ್ಥವಾಗದೆ ಒಮ್ಮೆ ಧೈರ್ಯ ಮಾಡಿ ಒಂದು ಸಣ್ಣ ಪ್ರಶ್ನೆ ಕೇಳಿದ್ದೆ. ಅದಕ್ಕೆ ಉತ್ತರಿಸುವ ಬದಲು, ಕೇಳಿಸಿಕೊಳ್ಳದೆ ಏನ್ ಕತ್ತೆ ಮೇಯಿಸುತ್ತಿದ್ದ್ಯಾ?" ಎಂದು ಇಡೀ ತರಗತಿಯ ಮುಂದೆ ಮೇಷ್ಟ್ರು ಅವಮಾನಿಸಿದರು. ಆ ಕ್ಷಣದಿಂದ ನಾನು ನನ್ನೊಳಗೆ ಮುದುರಿಕೊಂಡೆ. ಎಷ್ಟೇ ಪ್ರಶ್ನೆಗಳಿದ್ದರೂ ಕೇಳುವ ಧೈರ್ಯ ಮಾಡಲಿಲ್ಲ. ಪಾಠ ಅರ್ಥವಾಗದಿದ್ದಾಗ ನೋಟ್ಸ್ ಬರೆಯುತ್ತಿರಲಿಲ್ಲ, ಅದಕ್ಕೆ ಸಿಗುತ್ತಿದ್ದ ಏಟುಗಳು ನನಗೆ ಅಭ್ಯಾಸವಾಗಿ ಹೋಗಿತ್ತು. ಶಿಕ್ಷಣ ವ್ಯವಸ್ಥೆ ನನ್ನಲ್ಲಿ ಕಲಿಯುವ ಆಸಕ್ತಿಯನ್ನೇ ಕೊಂದುಹಾಕಿತ್ತು.


ನನ್ನ ಬದುಕಿನ ಬಗ್ಗೆ ನಾನೇ ಭರವಸೆ ಕಳೆದುಕೊಳ್ಳುತ್ತಿದ್ದ ಆ ಗೊಂದಲದ ದಿನಗಳಲ್ಲಿ 'ಜನಪದ ಸೇವಾ ಟ್ರಸ್ಟ್'ನ ಫೆಲೋಷಿಪ್ ಕೋರ್ಸ್ ಬಗ್ಗೆ ಮಾಹಿತಿ ಸಿಕ್ಕಿತು. ಎಲ್ಲಾ ಕೆಲಸಗಳಲ್ಲೂ ಜ್ಞಾನವಿದೆ, ಅದನ್ನು ಗುರುತಿಸಿ ಗೌರವಿಸಬೇಕು" ಎಂಬ ಆಶಯ ನನ್ನನ್ನು ಹೊಸ ಲೋಕಕ್ಕೆ ಕರೆದೊಯ್ದಿತು. ಅಲ್ಲಿಗೆ ಹೋಗುವಾಗಲೂ ನನ್ನ ತಲೆಯಲ್ಲಿ ಅದೇ ಹಳೆಯ ಕಲ್ಪನೆಗಳಿದ್ದವು—ಕಟ್ಟುನಿಟ್ಟಿನ ಕಟ್ಟಡಗಳು, ಕೈಯಲ್ಲಿ ಕೋಲು ಹಿಡಿದು ಬಡಿಯುವ ಶಿಕ್ಷಕರು. ಆದರೆ ಅಲ್ಲಿನ ವಾತಾವರಣ ಸಂಪೂರ್ಣ ವಿರುದ್ಧವಾಗಿತ್ತು.


ಅಲ್ಲಿ; ಒಂದು ಸುಂದರವಾದ ಗ್ರಂಥಾಲಯ, ನಾವು ಕೆಲಸ ಮಾಡುವ ಜಾಗ, ಮತ್ತು ಪ್ರಕೃತಿಯ ಮಡಿಲೇ ನಮ್ಮ ಕಲಿಕೆಯ ತಾಣವಾಗಿತ್ತು. ತಪ್ಪು ಮಾಡಿದಾಗ ದಂಡಿಸುವ ಬದಲು, ಪಕ್ಕದಲ್ಲಿ ಕೂರಿಸಿಕೊಂಡು ಅಕ್ಕರೆಯಿಂದ ಬುದ್ಧಿ ಹೇಳುತ್ತಿದ್ದರು. ಅವರನ್ನು 'ಸರ್, ಮೇಡಂ' ಎನ್ನುವ ಬದಲು 'ಅಣ್ಣ, ಅಕ್ಕ' ಎಂದು ಕರೆಯುವಾಗ ಹುಟ್ಟುತ್ತಿದ್ದ ಆಪ್ತತೆ, ದಡ್ಡ ಎಂದು ಮೂಲೆಗುಂಪು ಮಾಡದೆ ಅವರು ನನ್ನನ್ನು ಸಮಾನವಾಗಿ ಕಂಡ ರೀತಿ ನನ್ನಲ್ಲಿ ಹೊಸ ಆತ್ಮವಿಶ್ವಾಸವನ್ನು ಚಿಗುರಿಸಿತು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಬೆಲೆ ಸಿಗುತ್ತಿತ್ತು. ಈ ಮುಕ್ತ ವಾತಾವರಣ ನನ್ನೊಳಗೆ ಏನಾದರೂ ಸಾಧಿಸಬೇಕೆಂಬ  ಉತ್ಸಾಹವನ್ನು ತುಂಬಿತು. ನನ್ನ ಬದುಕನ್ನು ನಾನೇ ಕಟ್ಟಿಕೊಳ್ಳಬಲ್ಲೆ ಎಂಬ ದೃಢತೆ ಮೂಡಿತು.


ಆ ವಾತಾವರಣದಲ್ಲಿ ಅರಳಿದ ನಾನು, ಇಂದು ಹೆಮ್ಮೆಯಿಂದ ನೈಸರ್ಗಿಕ ಬಣ್ಣಗಾರಿಕೆಯನ್ನು ನನ್ನ ಬದುಕಾಗಿಸಿಕೊಂಡಿದ್ದೇನೆ. ನನ್ನ ಈ ಕಾಯಕ ಸಂಪೂರ್ಣವಾಗಿ ಶ್ರಮದಾನದಿಂದ ಕೂಡಿದ್ದು, ಇಲ್ಲಿ ಯಂತ್ರಗಳ ಹಂಗಿಲ್ಲ. ಹಿಂದಿನ ಕಾಲದಲ್ಲಿ 'ಶ್ರಮದ ಕೆಲಸ ಕೇವಲ ಕೆಳಜಾತಿಯವರಿಗೆ ಸೀಮಿತ' ಎಂಬ ತಪ್ಪು ಕಲ್ಪನೆಯಿತ್ತು. ಆದರೆ, ಮನುಷ್ಯ ಶ್ರಮವನ್ನು ಮರೆತು ಯಂತ್ರಗಳ ದಾಸನಾದ ಪರಿಣಾಮವಾಗಿ ಪ್ರಕೃತಿ ಇಂದು ಎಷ್ಟೊಂದು ನರಳುತ್ತಿದೆ ಎಂಬುದು ನಮಗೆಲ್ಲರಿಗೂ ಅರಿವಾಗುತ್ತಿದೆ.


ನನ್ನ ಎರಡು ಕೈಗಳ ಶ್ರಮದಿಂದ, ಪರಿಸರಕ್ಕೆ ಕಿಂಚಿತ್ತೂ ಹಾನಿಯಾಗದಂತೆ ನಾನು ಬದುಕು ಕಟ್ಟಿಕೊಂಡಿದ್ದೇನೆ ಎಂಬ ಸತ್ಯ, ನನಗೆ ಜಗತ್ತಿನ ಯಾವುದೇ ಪದವಿಗಿಂತಲೂ ಮಿಗಿಲಾದ ಹೆಮ್ಮೆಯನ್ನು ಮತ್ತು ಅರಿವನ್ನು ತಂದುಕೊಟ್ಟಿದೆ ಓದು, ಬರಹವನ್ನು ಎಲ್ಲರೂ ಕಲಿಯಲೇಬೇಕು ನಿಜ; ಆದರೆ ಅಕ್ಷರ ಜ್ಞಾನವೊಂದೇ ಶಿಕ್ಷಣವಲ್ಲ. ಶಿಕ್ಷಣವನ್ನು ನಾವು ವಿಶಾಲವಾದ ದೃಷ್ಟಿಕೋನದಿಂದ ನೋಡಬೇಕು. ನನ್ನ ಕಾಯಕದ ಮೂಲಕ ನಾನು ಕಲಿತ ಪಾಠಗಳು ಹಲವು:
ಭಾಷಾ ಜ್ಞಾನ: ಕಾಯಕದ ಮೂಲಕವೇ ನಾನು ಕನ್ನಡವನ್ನು ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಕಲಿತೆ.
ಪ್ರಾಯೋಗಿಕ ಗಣಿತ: ಬಣ್ಣಗಾರಿಕೆಗೆ ಬೇಕಾದ ಸಾಮಗ್ರಿಗಳ ಲೆಕ್ಕಾಚಾರ ಇಡುವುದರ ಮೂಲಕ ಗಣಿತವನ್ನು ಪ್ರಾಯೋಗಿಕವಾಗಿ ಅರಿತೆ.


ಓದು-ಬರಹದ ಹವ್ಯಾಸ: ನಿಧಾನವಾಗಿ ನನಗೆ ಅನಿಸಿತು ನಾನು ಮಾಡುವ ಕೆಲಸದ ಜೊತೆಗೆ ಆದ ಅನುಭವ ಮತ್ತು ಅದರಿಂದ ಆದ ಕಲಿಕೆಯನ್ನು ಬೇರೆ ಜನರ ಜೊತೆ ಹಂಚಿಕೊಳ್ಳಲಬೇಕೆನಿಸಿತು. ಆಗ ನನಗೆ ಗೊತ್ತಿದ್ದ ಅಲ್ಪಸ್ವಲ್ಪ ಕನ್ನಡದಲ್ಲಿ ನನ್ನ ಅನುಭವವನ್ನು ಬರೆದು ಫೇಸ್ ಬುಕ್ ನಲ್ಲಿ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದೆ. ಫೆಲೋಷಿಪ್ ಕೋರ್ಸಿನಲ್ಲಿ ಪ್ರತಿದಿನ ಎರಡು ಗಂಟೆಗಳ ಕಾಲ ಓದಲು ಅವಕಾಶವಿತ್ತು. ಅದರ ಭಾಗವಾಗಿ ಸಾಕಷ್ಟು ಪುಸ್ತಕಗಳನ್ನು ಓದಿದೆ. ಆ ಅನುಭವಗಳನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲು ಶುರುಮಾಡಿದೆ. ಹೀಗೆ ನನಗೆ ಓದುವ ಮತ್ತು ಬರೆಯುವ ಹವ್ಯಾಸ ಬೆಳೆಯಿತ

ನೈಸರ್ಗಿಕ ಬಣ್ಣಗಾರಿಕೆಯಲ್ಲಿ 'ನೀಲಿ ಬಣ್ಣದ'  ತಯಾರಿಕೆ ಅತ್ಯಂತ ವಿಶೇಷ ಮತ್ತು ಸಂಕೀರ್ಣವಾದದ್ದು. ಇಂಡಿಗೋ ಗಿಡವನ್ನು 'ಕೊಳೆಸುವ'  ಪ್ರಕ್ರಿಯೆಯ ಮೂಲಕ ಈ ಬಣ್ಣವನ್ನು ತೆಗೆಯಲಾಗುತ್ತದೆ. ಗಿಡವನ್ನು ಕೊಳೆಸುವಾಗ ಹುಟ್ಟುವ ಸೂಕ್ಷ್ಮಜೀವಿಗಳೇ ನಮಗೆ ನೀಲಿ ಬಣ್ಣವನ್ನು ನೀಡುತ್ತವೆ. ಆ ಸೂಕ್ಷ್ಮಜೀವಿಗಳನ್ನು ಸರಿಯಾಗಿ ಪೋಷಿಸಿ, ಕಾಪಾಡಿಕೊಂಡರೆ ಮಾತ್ರ ಬಣ್ಣ ನಿಖರವಾಗಿ ಬರುತ್ತದೆ. ಈ ಜೀವಿಗಳ ಲಾಲನೆ-ಪಾಲನೆ ಮಾಡುವುದು ಕೂಡ ಒಂದು ದೊಡ್ಡ ವಿಜ್ಞಾನ.


ಆರಂಭದಲ್ಲಿ ನನಗೆ ಮಾಡುವ ಕೆಲಸವನ್ನೇ ಪದೇ-ಪದೇ ಮಾಡುವುದು ಇಷ್ಟವಾಗುತ್ತಿರಲಿಲ್ಲ, ಕೇವಲ ಸೃಜನಶೀಲ  ಕೆಲಸಗಳು ಮಾತ್ರ ಇಷ್ಟವಾಗುತ್ತಿತ್ತು. ಆದರೆ, ನಿರಂತರ ಅಭ್ಯಾಸದಿಂದಲೇ ಒಬ್ಬ ಉತ್ತಮ ಕ್ರಿಕೆಟರ್ ರೂಪುಗೊಳ್ಳುವಂತೆ, ಪುನರಾವರ್ತನೆಯ ಮೂಲಕವೇ ಸೃಜನಶೀಲತೆ ಹುಟ್ಟುತ್ತದೆ ಎಂಬುದನ್ನು ನಾನು ಅರಿತೆ. ಇಂಡಿಗೋ ವಾಟ್ನಲ್ಲಿರುವ ಸೂಕ್ಷ್ಮಜೀವಿಗಳ ಒಡನಾಟ ನನಗೆ ಅತ್ಯಮೂಲ್ಯವಾದ 'ತಾಳ್ಮೆ'ಯನ್ನು ಕಲಿಸಿತು.
ನಾನು ಮಾಡುತ್ತಿರುವುದು ಕೇವಲ ಕೆಲಸವಲ್ಲ, ಇದೊಂದು ಹೋರಾಟವೂ ಹೌದು. ರಾಸಾಯನಿಕ ಬಣ್ಣಗಳನ್ನು ಬಳಸಿದ ನೀರನ್ನು ನದಿಗಳಿಗೆ ಬಿಡುವುದರಿಂದ ಜಲಮೂಲಗಳು ಕಲುಷಿತಗೊಂಡು ಜೀವವೈವಿಧ್ಯ ನಾಶವಾಗುತ್ತಿದೆ. ಆ ತಪ್ಪನ್ನು ನಾನು ಮಾಡುತ್ತಿಲ್ಲ ಎಂಬುದು ನನಗೆ ನೆಮ್ಮದಿ ನೀಡುತ್ತದೆ. ನಾವು ಬಣ್ಣ ಮಾಡಲು ಬಳಸಿದ ನೀರನ್ನು ನೇರವಾಗಿ ನಮ್ಮ ತೋಟದ ಗಿಡಗಳಿಗೆ ಉಣಿಸುತ್ತೇವೆ.

ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನ್ಯಾಯವಿದ್ದರೆ ಸಮಾಜ ನಮ್ಮನ್ನು ಗುರುತಿಸುತ್ತದೆ; ಅದಕ್ಕೆ ಯಾವುದೇ ಪ್ರಮಾಣಪತ್ರಗಳ ಅಗತ್ಯವಿಲ್ಲ. ಯಾವುದೇ ಕಾಯಕವನ್ನು ಪ್ರೀತಿ, ಆಸಕ್ತಿ ಮತ್ತು ಶ್ರದ್ಧೆಯಿಂದ ಮಾಡಿದರೆ ಅದು ನಮಗೆ ಬದುಕನ್ನು ಮಾತ್ರವಲ್ಲ, ಬದುಕುವ ಕಲೆಯನ್ನು ಕಲಿಸುತ್ತದೆ ಎಂಬುದಕ್ಕೆ ನನ್ನ ಈ ಪಯಣವೇ ಸಾಕ್ಷಿ. ನಮ್ಮ ಕೈಗಳ ಶ್ರಮದಲ್ಲಿರುವ ಜ್ಞಾನವನ್ನು ಎಂದು ನಾವು ಗುರುತಿಸಿ ಗೌರವಿಸಲು ಕಲಿಯುತ್ತೇವೆಯೋ, ಅಂದೇ ನಿಜವಾದ ಶಿಕ್ಷಣದ ಅರ್ಥ ನಮಗೆ ತಿಳಿಯುತ್ತದೆ.

 

 - ಲೋಕೇಶ್ ಹೆಚ್ ಆರ್

 

  |  

More Posts